ಕಾನ್ಪುರ

 ಉತ್ತರ ಪ್ರದೇಶದ ಒಂದು ನಗರ: ತಹಸೀಲ್ ಮತ್ತು ಜಿಲ್ಲಾ ಕೇಂದ್ರ. ಗಂಗಾನದಿಯ ದಕ್ಷಿಣ ದಂಡೆಯ ಮೇಲೆ ಉ.ಅ.26028' ಮತ್ತು ಪೂ.ರೇ.80021'ನಲ್ಲಿದೆ. ಲಖನೌಗೆ ನೈಋತ್ಯದಲ್ಲಿ 43 ಮೈ. ದೂರದಲ್ಲೂ ಅಲಹಾಬಾದಿಗೆ ವಾಯವ್ಯದಲ್ಲಿ 115 ಮೈ. ದೂರದಲ್ಲೂ ದೆಹಲಿಗೆ ಆಗ್ನೇಯದಲ್ಲಿ 245 ಮೈ. ದೂರದಲ್ಲೂ ಇರುವ ಈ ನಗರ ಮೂರು ರೈಲ್ವೆ ವಸತಿಗಳನ್ನೂ ದಂಡಿನ ಪ್ರದೇಶವನ್ನೂ ಆರ್ಮಾಪುರ್ ಉಪನಗರವನ್ನೂ ಒಳಗೊಂಡಿದೆ. ನದೀ ದಂಡೆಯ ಮೇಲಿರುವ ಹಲವಾರು ನಗರಗಳಂತೆ ಇದರ ಹಳೆಯ ನಗರ ನದೀಪಾತ್ರಕ್ಕೆ ಹತ್ತಿರದಲ್ಲಿ ನಿರ್ಮಿತವಾಗಲಿಲ್ಲ. ಅದು ನದಿಯಿಂದ ಒಂದು ಮೈಲಿ ಆಚೆಗಿದೆ. ಕಾನ್ಪುರ ಹಿಂದಿನಿಂದಲೂ ಮುಖ್ಯ ಸೈನಿಕ ನೆಲೆಯಾಗಿತ್ತು. ಅದರ ಬಳಿಯಲ್ಲೇ ಸೈನಿಕ ವಿಮಾನ ನೆಲೆಯೂ ಸ್ಥಾಪಿತವಾದುದರಿಂದ ಕಾನ್ಪುರದ ಪ್ರಾಮುಖ್ಯ ಇನ್ನೂಹೆಚ್ಚಿತು. ಇದು ಉತ್ತರ ಪ್ರದೇಶದ ಪ್ರಮುಖ ನಗರವಷ್ಟೇ ಅಲ್ಲ; ಭಾರತದಲ್ಲೇ ಅತ್ಯಂತ ದೊಡ್ಡ ನಗರಗಳಲ್ಲೊಂದಾಗಿದೆ.

 ಕಾನ್ಪುರ ಮುಖ್ಯ ರೈಲ್ವೆ ಮತ್ತು ರಸ್ತೆಗಳ ಸಂದಿಸ್ಥಳ. ದೆಹಲಿ-ಕಲ್ಕತ್ತ ಹೆದ್ದಾರಿ ಹಾದು ಹೋಗುವುದು ಕಾನ್ಪುರದ ಮೂಲಕ. ಉತ್ತರ, ಈಶಾನ್ಯ ಮತ್ತು ಮಧ್ಯ ರೈಲ್ವೆಗಳು ಇಲ್ಲಿ ಕೂಡುವುದರಿಂದ ಭಾರತದ ಉಳಿದ ಭಾಗಗಳೊಂದಿಗೆ ಇದಕ್ಕೆ ಸುಸಂಪರ್ಕ ಏರ್ಪಟ್ಟಿದೆ. ಇದು ಶಿಕ್ಷಣ ಕೇಂದ್ರ ಕೂಡ. ಕೃಷಿ ಮತ್ತು ವಸ್ತ್ರ ತಂತ್ರಶಾಸ್ತ್ರ ಕಾಲೇಜುಗಳೇ ಮುಂತಾದ ಹಲವು ಕಾಲೇಜುಗಳು ಇಲ್ಲುಂಟು. ಇವು ಆಗ್ರ ವಿಶ್ವವಿದ್ಯಾಲಯದ ಮನ್ನಣೆ ಪಡೆದಿವೆ. ಭಾರತೀಯ ತಂತ್ರಶಾಸ್ತ್ರ ಸಂಸ್ಥೆಯ (ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ) ವೈದ್ಯಕ ಕಾಲೇಜು ಲಖನೌ ವಿಶ್ವವಿದ್ಯಾಲಯದ ಮನ್ನಣೆ ಪಡೆದಿದೆ. ಸಣ್ಣ ಸರೋವರದ ಮೇಲೆ ನಿರ್ಮಿತವಾದ ಕಮಲಾ ವಿಶ್ರಾಂತಿ ಭವನ, ಸ್ಮಾರಕ ಕೂಪ, ಗಾಜಿನ ದೇಗುಲ- ಇವು ನಗರದ ಪ್ರೇಕ್ಷಣೀಯ ಸ್ಥಳಗಳು.

 ಕಾನ್ಪುರಕ್ಕೆ ಮೊದಲು ಕನ್ಹೈಯಪುರ ಎಂದು ಹೆಸರಿತ್ತು. ಅನಂತರ ಇದು ಕಾನ್ಹಪುರವಾಗಿ ಇಗ ಇದು ಕಾನ್ಪುರವೆನಿಸಿಕೊಂಡಿದೆ. ದೆಹಲಿಯ ಸುಲ್ತಾನರ ಕಾಲದಲ್ಲಿ ಕಾನ್ಪುರ ಪ್ರಾಂತೀಯ ರಾಜಧಾನಿಯಾಗಿತ್ತು. ಔಧ್ ಮತ್ತು ಬಂಗಾಳಗಳಗಡಿಯ ಕೋನೆಯ ಠಾಣೆಯಾಗಿದ್ದ ಕಾನ್ಪುರದ ಪ್ರಾಮುಖ್ಯವನ್ನರಿತಿದ್ದ ಬ್ರಿಟಿಷ್ ಗವರ್ನರ್-ಜನರಲ್ ರಾಬರ್ಟ್ ಕ್ಲೈವ್ ಅದನ್ನು ಸೈನ್ಯಠಾಣೆಯಾಗಿ ಆರಿಸಿಕೊಂಡು, ಔಧ್ ನವಾಬ ಕೊಟ್ಟ ಸೈನ್ಯದಳವನ್ನು ಅಲ್ಲಿ ನೆಲೆಗೊಳಸಿದ. 1801ರಲ್ಲಿ ಔಧ್ ನವಾಬನಿಂದ ರೋಹಿಲ್ಖಂಡ ಕಳದೋಆಬ್ ಮತ್ತು ಗೋರಖಪುರ ವಿಭಾಗಗಳನ್ನು ಲಾರ್ಡ್ ವೆಲೆಸ್ಲಿ ಪಡೆದುಕೊಂಡಾಗ ಕಾನ್ಪುರ ಬ್ರಿಟಿಷ್ ರಾಜ್ಯದ ಗಡಿಯ ಮುಖ್ಯ ಸ್ಥಳವಾಯಿತು.

 1857ರಲ್ಲಿ ಭಾರತದಲ್ಲಿ ಬ್ರಿಟಿಷರ ವಿರುದ್ಧ ಸಂಭವಿಸಿದೆ ಬಂಡಾಯದ ಕಾಲದಲ್ಲಿ ಕಾನ್ಪುರದ ಪಾತ್ರ ಪ್ರಧಾನವಾದದ್ದು. ಆ ಬಂಡಾಯ ಸಂಭವಿಸಿದಾಗ ಮಾಜಿ ಪೇಷ್ವೆ ಎರಡನೆಯ ಬಾಜಿರಾಯನ ಮಗ ನಾನಾಸಾಹೇಬ ವಾಸಿಸುತ್ತಿದ್ದದ್ದು ಕಾನ್ಪುರದ ಬಳಿಯ ಬಿಠೂರಿನಲ್ಲಿ. ಆತ ಕೂಡಲೇ ತಾನು ಪೇಷ್ವೆಯೆಂದು ಸಾರಿಕೊಂಡು, ಕಾನ್ಪುರದಲ್ಲಿ ನೆಲೆಗೊಂಡಿದ್ದ ಬಂಡಾಯಗಾರ ಸಿಪಾಯಿಗಳ ನಾಯಕತ್ವ ವಹಿಸಿಕೊಂಡ. ಬ್ರಿಟಿಷ್ ಭದ್ರ ನೆಲೆಗಳಿಗೆಲ್ಲ ಅವರು ಮುತ್ತಿಗೆ ಹಾಕಿದರು (1857ರ ಜೂನ್ 8). ಅಲ್ಲಿ ವಾಸಿಸುತ್ತಿದ್ದ ಬ್ರಿಟಿಷ್ ಜನ 27ರಂದು ಶರಣಾಗತರಾಗಬೇಕಾಯಿತು. ಅವರನ್ನೆಲ್ಲ ಸುರಕ್ಷಿತವಾಗಿ ಅಲಹಾಬಾದಿಗೆ ತಲಪಿಸಲು ಸಿಪಾಯಿಗಳು ಒಪ್ಪಿದರು. ಆದರೆ ಅವರ ದಂಡು ಅಲ್ಲಿಂದ ದೋಣಿಯಲ್ಲಿ ಕುಳಿತು ಹೊರಡುವಷ್ಟರಲ್ಲಿ ಅವರ ಮೇಲೆ ಗುಂಡಿನ ಮಳೆ ಕರೆಯಿತು. ನಾಲ್ವರು ಸೈನಿಕರು ವಿನಾ ಉಳಿದವರೆಲ್ಲ ಸತ್ತರು. ಇಂಗ್ಲಿಷರಲ್ಲಿ ಸಾಮಾನ್ಯ ಜನರೂ ಕೊಲೆಗೀಡಾದರು. ಅವರ ದೇಹಗಳನ್ನು ಬಾವಿಯೊಂದರೊಳಕ್ಕೆ ಎಸೆಯಲಾಯಿತೆಂದು ಹೇಳಲಾಗಿದೆ. ಇದರಿಂದ ಕೋಪಗೊಂಡ ಇಂಗ್ಲಿಷರು ನೀಲ್ ಮತ್ತು ಹ್ಯಾವ್‍ಲಾಕರ ನೇತೃತ್ವದಲ್ಲಿ ಸೈನ್ಯವೊಂದನ್ನು ಕಳುಹಿಸಿ ಕಾನ್ಪುರವನ್ನು ವಶಪಡಿಸಿಕೊಂಡು, ಭಾರತೀಯರ ಮೇಲೆ ಅತ್ಯಂತ ಕ್ರೂರವಾದ ರೀತಿಯಲ್ಲಿ ಸೇಡುತೀರಿಸಿಕೊಂಡರು. 1857ರ ನವೆಂಬರಿನಲ್ಲಿ ಗ್ವಾಲಿಯರ್ ವಿಭಾಗದ ದಳದ ಬಂಡಾಯಗಾರರು ಕಾನ್ಪುರವನ್ನು ಆಕ್ರಮಿಸಿಕೊಂಡಿದ್ದರು. ಡಿಸೆಂಬರಿನ ಆದಿಭಾಗದಲ್ಲಿ ಕಾಲಿನ್ ಕ್ಯಾಂಪ್‍ಬೆಲನ ನೇತೃತ್ವದಲ್ಲಿ ಇಗ್ಲಿಂಷ್ ಸೈನ್ಯ ಮತ್ತೆ ಅದನ್ನು ವಶಪಡಿಸಿಕೊಂಡಿತು.

 ಕಾನ್ಪುರದ ಕೈಗಾರಿಕಾ ಬೆಳೆವಣಿಗೆ ಉತ್ತರ ಭಾರತದಲ್ಲೇ ವಿಶಿಷ್ಟವಾದ್ದು. ಧರ್ಮ ಕೈಗಾರಿಕೆ ಬಹಳ ಮುಖ್ಯ. ಇದು ಸರ್ಕಾರಿ ಜೀನಿನ ಕಾರ್ಖಾನೆಯ ಸ್ಥಾಪನೆಯಿಂದ ಆರಂಭವಾಗಿ ಇಂದು ಬೃಹದ್ಗಾತ್ರ ಕೈಗಾರಿಕೆಯಾಗಿದೆ. ಹತ್ತಿ ನೂಲುವ, ನೇಯುವ, ಹಿಂಜುವ, ಒತ್ತುವ ಗಿರಣಿಗಳೂ ಸಣಬು ಮತ್ತು ಉಣ್ಣೆ ಗಿರಣಿಗಳೂ ವನಸ್ಪತಿ, ಸಾಬೂನು, ಪ್ಲಾಸ್ಟಿಕ್ಸ್, ಬಿಸ್ಕತ್ತು, ರಸಾಯನವಸ್ತು, ಹಿಟ್ಟು, ಅಕ್ಕಿತಯಾರಿಕೆ, ಭಟ್ಟಿ ಇಳಿಸುವುದು ಮತ್ತು ವಿವಿಧ ಎಂಜಿನಿಯರಿಂಗ್ ಕೈಗಾರಿಕೆಗಳೂ ಸ್ಥಾಪಿತವಾಗಿವೆ. ಹತ್ತಿ ಬಟ್ಟೆ, ಬಗೆಬಗೆಯ ಸರಕುಗಳು, ಸಕ್ಕರೆ, ಸಂಬಾರ ಮತ್ತು ಧಾನ್ಯಗಳ ವ್ಯಾಪಾರದ ಮುಖ್ಯ ಕೇಂದ್ರವಿದು. 

 1901ರಿಂದೀಚೆಗೆ ಕಾನ್ಪುರದ ಜನಸಂಖ್ಯೆ ನಾಲ್ಮಡಿಯಾಗಿ ಬೆಳೆದಿದೆ. 1931ರಿಂದ 1941ರ ವರೆಗಿನ ಕಾಲದಲ್ಲಿ ಇದು ಲಖನೌ ನಗರವನ್ನೂ ಮೀರಿ ಬೆಳೆಯಿತು. 1941ರಲ್ಲಿ ಇದರ ಜನಸಂಖ್ಯೆ 4,87,324. 1961ರಲ್ಲಿ ಇದು 9,71,062ಕ್ಕೆ ಏರಿತು. ಇದರ ಕೈಗಾರಿಕಾ ವಾಣಿಜ್ಯ ಪ್ರಾಮುಖ್ಯ ಅಧಿಕವಾದದ್ದು ಅಮೆರಿಕನ್ ಅಂತರ್ಯುದ್ಧ ಕಾಲದಲ್ಲಿ. ಅದರಿಂದಾಗಿ ಭಾರತದ ಹತ್ತಿಗೆ ಒಮ್ಮೆಗೇ ಬೇಡಿಕೆ ಹೆಚ್ಚಿತು. ಆಗ ತಾನೆ ಕಾನ್ಪುರಕ್ಕೆ ಕಲ್ಕತ್ತದೊಂದಿಗೆ ರೈಲ್ವೆ ಸಂಪರ್ಕ ಏರ್ಪಟ್ಟಿದ್ದುದರಿಂದ ಅದು ಉತ್ಕರ್ಷ ನಗರವಾಗಿ (ಬೂಮ್ ಟೌನ್) ಪರಿಣಮಿಸಿತು. ಸೈನ್ಯ ಶಿಬಿರಗಳ ಮಣ್ಣಿನ ಗೋಡೆಯ ಗುಡಿಸಲುಗಳನ್ನು ದಂಡಿನ ಮೋತೀಖಾನೆಯ ಇಲಾಖೆ ಆನೆಗಳಿಂದ ಉರುಳಿಸಲಾಯಿತು. ಹತ್ತಿಯ ಬೇಲುಗಳು ರಾಶಿರಾಶಿಯಾಗಿ ತುಂಬಿದ್ದುದರಿಂದ ನಗರದ ಕಿರು ಓಣಿಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟಾಗಿತ್ತೆಂದು ಹೇಳಲಾಗಿದೆ. ಜೊತೆಗೆ ದೋಆಬ್ ಮತ್ತು ಔಧ್ ಪ್ರದೇಶಗಳ ಸ್ಥಳೀಯ ತಯಾರಿಕೆಗಳೂ ಇಲ್ಲಿಗೆ ಬರಲಾರಂಭಿಸಿದುವು. ಕಾನ್ಪುರದಪ್ರಥಮ ಹತ್ತಿ ಗಿರಣಿಗಳು ಸ್ಥಾಪಿತವಾದ್ದು 1869 ರಿಂದ 1882ರ ವರೆಗಿನ ಕಾಲದಲ್ಲಿ. ಕಾನ್ಪುರವೀಗ ಭಾರತದ ಹಳೆಯ ಕಾರ್ಖಾನೆ ನಗರಗಳಲ್ಲೊಂದಾಗಿದೆ. ಅಹಮಬಾದಿನಂತೆ ಇದೂ ಹತ್ತಿ ವ್ಯಾಪಾರ ಮತ್ತು ಜವಳಿ ಕೈಗಾರಿಕೆಯಿಂದಾಗಿ ಮುಂದೆ ಬಂದಿತಾದರೂ ಇಲ್ಲಿಯ ಕೈಗಾರಿಕೆಗಳು ವೈವಿಧ್ಯಮಯವಾಗಿದೆ.

 ಕಾನ್ಪುರ ಜಿಲ್ಲೆ : ಗಂಗಾ-ಯಮುನಾ ನದಿಗಳ ಮಧ್ಯೆ ಉ.ಅ. 25o 26'-26 28' ಮತ್ತು ಪೂ.ರೇ. 79 31'-80 34' ನಡುವೆ ಹರಡಿದೆ. ಅತ್ಯಂತ ಫಲವತ್ತಾದ ದೋಆಬ್ ಪ್ರದೇಶವಿದು. ದರ ವಿಸ್ತೀರ್ಣ 2,357 ಚ.ಮ್ಮೆ. ಜನಸಂಖ್ಯೆ 23,81,353 (1961). ಖಿಂದ್, ಸೇಗುರ್, ಈಶಾನ್, ಪಾಂಡವ, ಉತ್ತರ ನೋನ್ ಮತ್ತು ದಕ್ಷಿಣ ನೋನ್ ಇಲ್ಲಿ ಹರಿಯುವ ಇತರ ನದಿಗಳು. ಈ ಜಿಲ್ಲೆ ಆಗಿಂದಾಗ್ಗೆ ಪ್ರವಾಹ ಉಪಟಳಕ್ಕೆ ತುತ್ತಾಗಿದೆ. 1924 ಮತ್ತು 1948ರಲ್ಲಿ ಪ್ರವಾಹ ಬಂದಾಗ ಪರಮಟ್ ಮತ್ತು ಹಳೆಯ ಕಾನ್ಪುರ ನಗರ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದುವು. ಗಂಗಾನದಿಯಲ್ಲಿ ನೀರು ಅತಿಯಾಗಿ ಬಂದಾಗ ನೋನ್ ನದಿಯ ನೀರು ಹಿಂದಕ್ಕೆ ಒದೆದುಕೊಂಡು ಆ ಸುತ್ತೆಲ್ಲ ಹರಡುತ್ತದೆ. ಇಲ್ಲಿಯ ವಾಯುಗುಣ ಬೇಸಗೆಯಲ್ಲಿ ತಾಪಕರ, ಒಣಹವಾಯುಕ್ತ ; ಚಳಿಗಾಲದಲ್ಲಿ ಶೀತಲ. ಸರಾಸರಿ ಮಳೆ 33" ಮಾವು ಮತ್ತು ಇಪ್ಪೆ ತೋಪುಗಳು ಅಲ್ಲಲ್ಲಿ ಹರಡಿವೆ. ಜಿಲ್ಲೆಯ ಒಂದು ಭಾಗಕಾಡು. ಗಂಗಾ ಕಾಲುವೆಯ ನಾಲ್ಕು ಶಾಖೆಗಳಿಂದಲೂ ಜಿಲ್ಲೆಗೆ ನೀರಾವರಿ ಸೌಲಭ್ಯಲಭಿಸಿದೆ. ಕಾಳು, ಗೋಧಿ, ಅವರೆ, ಬಾರ್ಲಿ, ಸಾಸವೆ, ಮುಸುಕಿನ ಜೋಳ, ಎಳ್ಳು, ಬತ್ತ, ಬಾಜ್ರ, ಕಬ್ಬು, ಹತ್ತಿ-ಇವು ಮುಖ್ಯ ಬೆಳೆಗಳು. 

 ಬಿಠೂರ್ ಈ ಜಿಲ್ಲೆಯ ಪುರಾತನ ಕ್ಷೇತ್ರಗಳಲ್ಲೊಂದು. ಇಲ್ಲಿ ಬ್ರಹ್ಮನ ಪಾದದ ಗುರುತೆಂದು ಹೇಳಲಾದ ಚಿಹ್ನೆಯೊಂದು ಇದೆ. ಇದು ಹಿಂದೂಗಳಿಗೆ ಪವಿತ್ರ. ವಾಲ್ಮೀಕಿ ಇಲ್ಲಿ ಆಶ್ರಮ ಕಟ್ಟಿಕೊಂಡಿದ್ದನೆಂದು ಹೇಳಲಾಗಿದೆ. ಆರಾಂದ್‍ನ ಸುತ್ತ ಮುತ್ತ 6ರಿಂದ 9ನೆಯ ಶತಮಾನಗಳ ನಡುವಣ ಕಾಲದಲ್ಲಿ ನಿರ್ಮಿತವಾದ ಅನೇಕ ದೇಗುಲಗಳ ಅವಶೇಷಗಳುಂಟು.

 

(ಸಿ.ಕೆ.ವೈ.ಡಿ.; ಆರ್.ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ